ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಒಂದು ಯುಗಾಂತ್ಯ ಕಥನ

ಲೇಖಕರು :
ರಾಜ್ ಕುಮಾರ್
ಶನಿವಾರ, ಜುಲೈ 26 , 2014

ಸ್ಥಿತ ಪ್ರಜ್ಞತೆ ಮನುಷ್ಯನ ಪರಿಪಕ್ವತೆಯನ್ನು ತೋರಿಸುತ್ತದೆ. ಹರುಷಕ್ಕೆ ಹಿಗ್ಗದ ದುಃಖಕ್ಕೆ ಬಗ್ಗದ, ನೋವು ನಲಿವಿಗೆ ಸ್ಥಿರವಾಗಿ ನಿಲ್ಲುವವನನ್ನು ಸ್ಥಿತ ಪ್ರಜ್ಞ ಎಂದು ಹೇಳಬಹುದು. ಈ ಪರಿಪಕ್ವತೆ ಸುಲಭವಾಗಿ ಸಿದ್ಧಿಸುವುದಿಲ್ಲ. ಜೀವನಾನುಭವದ ರಸಭಾವವನ್ನು ಹೀರಿ ಸ್ವೀಕರಿಸಿದ ರೀತಿಯಲ್ಲಿ ಈ ಸಾಧನೆಯ ಗುರಿ ಅಡಗಿದೆ. ಬೆಂಕಿಯೆಂದು ತಿಳಿಯದೆ ಪತಂಗ ಹಾರುವುದುಂಟು. ಮನುಷ್ಯ ಮಾತ್ರ ಬೆಂಕಿ ಎಂದು ತಿಳಿದು, ಆ ಸುಡುವ ಅನುಭವವಾದರೂ ಅದೇ ಬೆಂಕಿಗೆ ಹಾರುವಲ್ಲಿ ಸ್ವಾರ್ಥಿಯಾಗಿಬಿಡುತ್ತಾನೆ. ಪರಿಣಾಮ ಅರಿತಿದ್ದರೂ ಸ್ವಾರ್ಥ ಅಳಿಸುವುದಿಲ್ಲ. ಇದು ಬದುಕಿನ ವಾಸ್ತವ ದರ್ಶನ ಅಂತ ಹೇಳಬಹುದಾದರೂ ಇದನ್ನೆಲ್ಲ ಮೀರಿ ನಿಂತ ವ್ಯಕ್ತಿತ್ವದ ದರ್ಶನ ಮತ್ತದರ ಅನುಭವವಾಯಿತು. ಇದು ಮಧುರ ಅನುಭವವೋ ಅಲ್ಲ ವಾಸ್ತವದ ಅರಿವೋ ನನ್ನ ಮನಸ್ಸು ಗೊಂದಲದಲ್ಲಿ ಮುಳುಗುತ್ತದೆ.

ಬಲಿಪ ನಾರಾಯಣ ಭಾಗವತರು
ಮೊನ್ನೆಯ ಒಂದು ಸುಂದರ ಭಾನುವಾರ. ಮಿತ್ರ ಸುಬ್ಬಣ್ಣ , ಅದಮ್ಯ ಹುರುಪಿನಲ್ಲೇ ಭಾಗವತರಾದ ಇಂದಿನ ಹಿರಿಯ ಬಲಿಪ್ಪ ಭಾಗವತರಲ್ಲಿಗೆ ಕರೆದುಕೊಂಡು ಹೋದರು. ಬಹಳ ದಿನಗಳಿಂದ ನಾನು ಮುಂದೂಡುತ್ತಿದ್ದ ಘಳಿಗೆ ಬಂದೇ ಬಿಟ್ಟಿತು. ಬಲಿಪ್ಪರ ಮನೆಗೆ ಹೋಗುವುದು ನನ್ನ ಬಹಳ ದಿನಗಳ ಬಯಕೆಯಾಗಿತ್ತು. ಆದಿನ ಬಲಿಪ್ಪರ ಮನೆಯ ಅಂಗಳದಲ್ಲಿ ಕಾಲಿಟ್ಟಾಗ ಮನೆಯ ಬಾಗಿಲಲ್ಲೇ ಬಲಿಪ್ಪರು ನಿಂತಿದ್ದರು. ಬಹಳ ಹಳೆಯದಾದ ಮನೆ. ಜಗಲಿಯ ಭಾಗಕ್ಕೆ ಸಿಮೇಂಟ್ ಶೀಟ್ ಹಾಕಿ ಮನೆಯನ್ನು ಇನ್ನಷ್ಟು ದೊಡ್ಡದು ಮಾಡಿದ್ದರು. ಅಲ್ಲಿ ಇರಿಸಿದ್ದ ಕುರ್ಚಿಯನ್ನು ತೋರಿಸಿ ಕುಳ್ಳಿರಿಸಿ ಪ್ರಾಥಮಿಕ ಉಪಚಾರ ಮಾಡಿದರು. ಅಷ್ಟರಲ್ಲಾಗಲೇ ಮನೆಯವರು ಹಲವರು ಬಂದರು. ಬಲಿಪ್ಪಜ್ಜ ಮತ್ತೋಂದು ಕುರ್ಚಿ ಎಳೆದು ನಮ್ಮೊಂದಿಗೆ ಮಾತನಾಡಲು ಕುಳಿತರು.

ಅದೇ ಕಿರು ನಗುವಿನ ಮಗು ಮುಖ. ಈ ಮುಖದಲ್ಲೇ ನಾನು ಸ್ಥಿತ ಪ್ರಜ್ಞತೆಯನ್ನು ಪ್ರತೀ ಬಾರಿ ಕಾಣುತ್ತೇನೆ. ಬಲಿಪ್ಪರು ಅತಿಯಾಗಿ ನಕ್ಕದ್ದನ್ನು ಅಥವಾ ಅತ್ತದ್ದನ್ನು ಯಾರಾದರೂ ನೋಡಿರಬಹುದೇ? ಎಂದು ಅನುಮಾನಿಸುತ್ತೇನೆ. ಕಿರು ನಗುವೊಂದು ಆ ಮುಖದ ಶಾಶ್ವತ ಬಣ್ಣ. ಅದು ಮನಸ್ಸಿನ ಕನ್ನಡಿಯ ನಗುವಲ್ಲ. ಅದೇಕೋ ಬಲಿಪ್ಪರನ್ನು ಮುಗ್ಧ ಅಂತ ಒಪ್ಪಿಕೊಳ್ಳುವಲ್ಲಿ ನನ್ನ ಮನಸ್ಸು ಪ್ರತಿಬಾರಿಯೂ ಹಟ ಮಾಡುತ್ತದೆ. ಅವರ ಜೀವನಾನುಭವದ ಪರಿಪಕ್ವ ಮಾತುಗಳ ಆ ಭಾವದಲ್ಲಿ ಮುಗ್ಧತೆ ಗುರುತಿಸಲಾಗುವುದಿಲ್ಲ. ಮುಗ್ಧತೆ ಅದು ಆ ಜೀವನದ ಶೈಲಿ ಆಗಿರಬಹುದಲ್ಲ? ಅದು ಹೋಗಲಿ, ಇದು ಇಲ್ಲಿ ವಿಮರ್ಶೆಯಲ್ಲ. ಬಲಿಪ್ಪರ ಮುಂದಿನ ಮಾತುಕತೆಗೆ ಇದು ಸಣ್ಣ ಪೀಠಿಕೆ ಆಷ್ಟೇ.

ಹೋದ ನಮ್ಮೊಡನೆ ಬಲಿಪ್ಪರು ಮಾತಿಗೆ ತೊಡಗಿದರು. ಯಾತಾರ್ಥ್ಯಕ್ಕಾದರೆ ಅಂದು ಬಲಿಪ್ಪರಲ್ಲಿ ಒಂದಿಷ್ಟು ಸಂವಾದ ಮಾಡಿ ಅದನ್ನು ದಾಖಲಿಸಿಕೊಳ್ಳುವ ಉದ್ದೇಶ ಇದ್ದರೂ, ನಮ್ಮ ಕ್ಯಾಮೆರ ಬುಕ್ಕು ಸಿದ್ಧವಾಗುವ ಮೊದಲೇ ಬಲಿಪ್ಪಜ್ಜ ಅಜ್ಜನ ಕಥೆ ಹೇಳಲಾರಂಭಿಸಿದರು. ಅದು ನಮ್ಮ ಬೇಡಿಕೆಗಾಗಿ ಆಡಿದ ಮಾತುಗಳಲ್ಲ. ಮನದಾಳ ಅನಿಸಿಕೆ ಅತ್ಮೀಯವಾಗಿ ವ್ಯಕ್ತವಾಯಿತು. ನಾವು ಏನನ್ನು ಕೇಳದೇ ಇದ್ದರೂ ಅದೇನು ಕಂಡಿತೋ ಮಾತು ಮುತ್ತಾಗಿ ಚೆಲ್ಲಿಕೊಂಡಿತು. ಅದೆಂತಹ ಕಥೆ? ಬಲಿಪ್ಪರು ಕ್ಯಾಮೆರಾ ಮುಂದೆ ಹೀಗೆ ಮಾತನಾಡುವುದೇ ಇಲ್ಲ. ಇಂತಹ ಮಾತುಗಳು ಯಾವಾಗ ಯಾವಗಲೋ ನಿರೀಕ್ಷೆಯಿಲ್ಲದೇ ಹೊರಬೀಳುತ್ತವೆ. ನಾವು ಕ್ಯಾಮೆರ ಪುಸ್ತಕ ಹಿಡಿದು ಕುಳಿತರೆ ಈ ಬಗೆಯ ಕಥೆಗಳು ನೆನಪಿಗೇ ಬರುವುದಿಲ್ಲವೋ ಏನೋ? ಕೊನೆಗೊಮ್ಮೆ ನಾವು ಏನೂ ಸಿದ್ಧವಾಗಿಲ್ಲದಾಗ ಹೊರಬೀಳುತ್ತವೆ. ಪಂಚಗವ್ಯಮಾಡುವ ಸಮಯದಲ್ಲಿ ನಮ್ಮಜ್ಜ, ಹಟ್ಟಿಯಲ್ಲಿ ದನದ ಹಿಂದೆ, ಗೋ ಅರ್ಕಕ್ಕೆ ಕವಳಿಗೆ ಹಿಡಿದು ನಿಂತಹಾಗೆ, ಊಹೂಂ ದನ ಸ್ಪಂದನೆಯಿಲ್ಲದೆ ನಿಂತು ಬಿಡುತ್ತದೆ. ಅಜ್ಜ ಒಂದಷ್ಟು ನುಸಿ ಕಡಿತ ಅನುಭವಿಸಬೇಕು. ನಾವೂ ಅಷ್ಟೇ ನಮ್ಮ ಸಂಗ್ರಹದ ಕವಳಿಗೆ ತುಂಬಿಸುವುದಕ್ಕೆ ನಿಂತರೆ ಬಲಿಪ್ಪರಿಗೆ ಇಂತಹ ಕಥೆಗಳ ಪ್ರೇರೇಪಣೆ ಆಗುವುದೇ ಇಲ್ಲ. ಆದರೂ ಬಲಿಪ್ಪಜ್ಜ ಎಂತಹ ಕಥೆ ಹೇಳಿಬಿಟ್ಟರು. ಅದನ್ನು ಹಾಗೇ ಒಪ್ಪಿಸೋಣವೇ ನನಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ನನ್ನ ಭಾವನೆಗಳ ಮೂಲಕವೇ ಹೇಳಿಬಿಡುತ್ತೇನೆ.

“ನನಗೀಗ ವರುಷ ಎಪ್ಪತ್ತೇಳು ಆಯಿತು. ಈಗ ಯಾರ ಆಮಂತ್ರಣವನ್ನೂ ಒಪ್ಪಿಕೊಳ್ಳುವುದಿಲ್ಲ. (ಆಟದ ಆಮಂತ್ರಣ). “ ಗೋಡೆಯ ಮೇಲೆ ನೇತು ಹಾಕಿದ ಅಜ್ಜ ಬಲಿಪ್ಪರ ದೊಡ್ಡ ಫೋಟೋವನ್ನು ಒಂದು ಸಲ ತಲೆ ಎತ್ತಿ ನೋಡಿದರು.

“ಅಜ್ಜ ಸಾಯುವಾಗ ಅವರಿಗೆ ಎಪ್ಪತ್ತೈದು. ಅದಕ್ಕಿಂತ ಒಂದು ವರ್ಷ ಮೊದಲೇ ಪದ ಹೇಳುವುದನ್ನು ನಿಲ್ಲಿಸಿದ್ದರು. ನಾನು ಇನ್ನೂ ಹೇಳ್ತಾ ಇದ್ದೇನೆ. ಯಾಕೆಂತ ಗೊತ್ತಿಲ್ಲ. ಅವರಿಂದಲೂ ಎರಡು ವರ್ಷ ಜಾಸ್ತಿ.” ( ಪ್ರಾಯ ಜಾಸ್ತಿಯೋ? ಪದಹೇಳಿದ್ದು ಜಾಸ್ತಿಯೋ? ನನ್ನ ಅನುಮಾನ ಅಷ್ಟೇ ) ಯಾರು ಕರೆದರೂ ಅಜ್ಜ ಹೋಗುತ್ತಿರಲಿಲ್ಲ. ಪದ ಹೇಳುವುದಿಲ್ಲ ಅಂತ ವಾಪಾಸು ಕಳಿಸ್ತಿದ್ರು. ಆದರೆ ಒಂದು ದಿನ ಕೊನೆಯ ನಿರ್ಧಾರಕ್ಕೆ ಬಂದ್ರು. ಒಂದು ದಿನ ಮಲ್ಲ ದೇವಸ್ಥಾನದಲ್ಲಿ ಪದ ಹೇಳಿಬಿಡುವ.”

ಬಲಿಪರವರ ಅಜ್ಜನವರು
ಆ ಹಿರಿಯ ಚೇತನ ಹಾಗೇಕೆ ನಿರ್ಧರಿಸಿತೋ.? ಕೊನೆಗೆ ಒಪ್ಪಿದರಲ್ಲ. ಎಲ್ಲವೂ ಸಿದ್ಧತೆಯಾಗಿಬಿಟ್ಟಿತು. ಪ್ರಸಂಗ, ಅಜ್ಜ ಬಲಿಪ್ಪರ ಇಷ್ಟದಂತೆ ’ಪಂಚವಟಿ’. ಪಾರ್ತಿಸುಬ್ಬನ ಪ್ರಸಂಗ. ಬಲಿಪ್ಪ ಶೈಲಿಯ ಮೊಹರು ಒತ್ತಿದಂತಹ ಪ್ರಸಂಗ. ಅಜ್ಜರು ಹೇಳಿದರಂತೆ ಪಂಚವಟಿಯ ಎಲ್ಲಾ ಪದಗಳನ್ನು ಹಾಕಬೇಕು. ಸ್ತುತಿಯಿಂದ ತೊಡಗಿ ಮಂಗಳದವರೆಗೆ ಒಂದೂ ಪದವನ್ನು ಬಿಡದೆ ಈ ತಾಳ ಮದ್ದಲೆ ನಡೆಯಬೇಕು. ( ಇಲ್ಲಿ, ತಾಳ ಮದ್ದಲೆಯೋ ಬಯಲಾಟವೋ ಆ ಗಂಭೀರ ಸನ್ನಿವೇಶದಲ್ಲಿ ಯಾವುದು ಎಂದು ಕೇಳುವುದರತ್ತವೂ ನನ್ನ ಗಮನ ಹೋಗಲಿಲ್ಲ. ತಾಳಮದ್ದಲೆಯೇ ಆಗಿರಬೇಕು) ಒಂದೂ ಪದ ಬಿಡದ ಆ ಪಂಚವಟಿ ಪ್ರಸಂಗ ಅದು ಹೇಗಿರಬಹುದು? ನಮಗೆ ಕಲ್ಪಿಸುವಾಗಲೇ ರೋಮಾಂಚನವಾಗಿಬಿಡುತ್ತದೆ. ಇನ್ನು ಅನುಭವ?

“ಪಂಚವಟಿಯ ಎಲ್ಲಾ ಪದ ಹಾಕಬೇಕು. ಆದರೆ ನನ್ನಿಂದ ಒಬ್ಬನಿಂದಲೇ ಸಾಧ್ಯವಿಲ್ಲ. ಜೋಯಿಸರನ್ನೂ ಕರೆಯಿರಿ” ಹಾಗೆ ಅವರು ಜೋಯಿಸರನ್ನು ಕರೆಯಿರಿ ಎಂದು ಹೇಳಿದ್ದು ಬೇರೆ ಯಾರನ್ನೂ ಅಲ್ಲ, ಮತ್ತೋಬ್ಬ ಹಿರಿಯ ಭಾಗವತ, ಶ್ರೀ ಪುತ್ತಿಗೆ ರಾಮಕೃಷ್ಣ ಜೋಯಿಸರನ್ನು. ಈ ಇಬ್ಬರೂ ಯಕ್ಷಗಾನದ ಬೃಹತ್ ಮರದ ಮೊದಲ ಎರಡು ರೆಂಬೆಯಂತೆ. ಅಜ್ಜ ಹೀಗೆ ಹೇಳಿದುದರ ಮುನ್ಸೂಚನೆಯಾದರೂ ಏನಿರಬಹುದು? ಅದಾಗ ತಾನೇ ಔಷಧ ಬಲದಿಂದಲೇ ಬದುಕುವಾಗ ಹೀಗೆ ಹೇಳಿದುದರ ಬಗ್ಗೆ ಯಾರೂ ಯೋಚಿಸುವುದಿಲ್ಲ.

ಅಜ್ಜ ಬಲಿಪ್ಪರಿಗೆ ಒಂದು ವರ್ಷ ಮೊದಲೇ ವೈದ್ಯರು ಎಚ್ಚರಿಕೆ ಕೊಟ್ಟಿದ್ದರು. ಇನ್ನು ನೀವು ಭಾಗವತಿಕೆ ಮಾಡಬಾರದು ಅಂತ. ಆದರೆ ಕಲಾವಿದನ ಮನಸ್ಸು, ಅದೂ ಉಚ್ಛ್ರಾಯ ಪದದಲ್ಲಿ ಇರುವ ಕಲಾವಿದ ವೈದ್ಯರ ಮಾತು ಕೇಳುವ ಸ್ಥಿತಿಯಲ್ಲಿರಲು ಸಾಧ್ಯವೇ? ತನ್ನ ಬಗ್ಗೆ ಒಂದು ಆತ್ಮವಿಶ್ವಾಸ ಇರುತ್ತದೆ. ಆ ವಿಶ್ವಾಸ ವೈದರನ್ನೂ ಸೋಲಿಸಿಬಿಡುತ್ತದೆ ! ಲಯ ಬದ್ಧ ಶ್ರುತಿ ಮೀಟುವಾಗ ಒಂದೆರಡು ಪದ ಅಂತ ತೊಡಗಿದರೆ ಮತ್ತೆ ಅದು ನಿಲ್ಲುವುದಿಲ್ಲ. ಪಂಚವಟೀ ಪ್ರಸಂಗ ಆರಂಭವಾಯಿತು. ಅಜ್ಜ ಬಲಿಪ್ಪರು ಆದಿನ ಅದ್ಭುತವಾಗಿ ಹಾಡಿದರಂತೆ. ಇದು ಎಣ್ಣೆ ಆರಿದ ದೀಪ ಕೊನೆಯದಾಗಿ ಸಂಪೂರ್ಣ ಪ್ರಭೆಯಿಂದ ಒಮ್ಮೆ ಉರಿದಂತೆ ಎಂದು ಯಾರು ಭಾವಿಸಿದ್ದರು? ಅಜ್ಜ ಬಲಿಪ್ಪರು ಹಾಡಿದರು, ಹಾಡಿದರು ಯಕ್ಷಬ್ರಹ್ಮನ ಗಾಯನ ಸುತ್ತಮುತ್ತಲು ಪ್ರತಿಧ್ವನಿಸುತ್ತಿದ್ದಹಾಗೇ ಆ ಒಂದು ಪದ “ ಎನುತ ನಿಜ ಮನದೊಳಗೆ ಯೋಚನೆಯ ಮಾಡಿ.....” ಭಾಗವತರ ಪ್ರಸಂಗದ ಕೊನೆಯ ಅಕ್ಷರವನ್ನೇ ಸಾರಿಬಿಟ್ಟಿತು. ಸ್ವ ನಿಯಂತ್ರಣವನ್ನು ಕಳೆದು ಕೊಂಡ ಶರೀರ ಹಿಂದಕ್ಕೊರಗಿತು. ಕೈಯಲ್ಲಿದ್ದ ಜಾಗಟೆ ಕೋಲು ಸದ್ದಿಲ್ಲದೇ ಸುಮ್ಮನಾಯಿತು. ಬಲಿಪ್ಪರು ಬಸವಳಿದು ಅಲ್ಲೇ ಕುಸಿದು ಒರಗಿಕೊಂಡರು. ಅಷ್ಟೂ ಹೊತ್ತು ಯಕ್ಷಗಾನ ಪದಗಳನ್ನು ಹೇಳುತ್ತಿದ್ದ ಕಂಠ ಒಂದೇ ಸವನೆ ರಕ್ತವನ್ನು ಚಿಮ್ಮಿಸತೊಡಗಿತು. ಮಾತ್ರವಲ್ಲ ಬಹಿರ್ದೆಶೆಯ ವಿಸರ್ಜನೆಯೂ ನಿಯಂತ್ರಣವಿಲ್ಲದೇ ಇದ್ದುದನ್ನು ತೋರಿಸಿತು. ಕೂಡಲೇ ವೈದ್ಯರನ್ನು ಹುಡುಕಲಾರಂಭಿಸಿದರು. ಕೊನೆಗೆ ಮುಳಿಯದ ಡಾಕ್ಟರ್ ಬಂದರು ನಾಡಿ ಮುಟ್ಟಿ ನೋಡಿದರು. ಕೂಡಲೇ ಆಸ್ಪತ್ರೆಗೆ ಸಾಗಿಸುವಂತೆ ಹೇಳಿದರು. ಹಾಗೂ ಕೊನೆಗೆ ಹೇಳಿದರು...”ಇಲ್ಲ ಇದು ಇನ್ನು ನಾಳೆಯವರೆಗೆ ಮಾತ್ರ. “

ಮತ್ತೆ ಎರಡುದಿನ ಆಸ್ಪತ್ರೆಯಲ್ಲೇ ನರಳಿದ ಯಕ್ಷಗಾನದ ಭಾಗವತ ಬ್ರಹ್ಮ, ಯಕ್ಷಗಾನಕ್ಕೆ ಶಾಸನದ ಗ್ರಂಥವಾದ ಬಲಿಪ್ಪಜ್ಜ ಕೊನೇಯ ಪುಟವನ್ನು ತೋರಿಸಿ ಮರಳಿ ಬಾರದ ಲೋಕಕ್ಕೆ ತಮ್ಮ ಪಯಣವನ್ನು ಮುಂದುವರೆಸಿದರು. ಪಂಚವಟಿ ಪ್ರಸಂಗದ ಪದಗಳಲ್ಲಿ ಅದೇನು ಮೋಹವೋ ಈ ಭಾಗವತರಿಗೆ. ಅದನ್ನೇ ಚರಮ ಮಂತ್ರವನ್ನಾಗಿಸಿಕೊಂಡರು.

ನನ್ನೆದುರು ಕುಳಿತ ಈ ಕಿರಿಯ ಬಲಿಪ್ಪರು ನಿರ್ವಿಕಲ್ಪ ಭಾವದಿಂದ ಅಂದಿನ ಘಟನೆಯನ್ನು ಸ್ಮರಿಸಿದರು. ಮೌನವಾದ ನಿಟ್ಟುಸಿರು ಬೇಡವೆಂದರೂ ಬಿಟ್ಟು ಬಿಟ್ಟೇ. ಆಮೇಲೆ ಬಲಿಪ್ಪರ ಮುಖವನ್ನು ನೋಡಿದೆ. ಯಾವ ಭಾವವಿದೆ ಆ ಮುಖದಲ್ಲಿ? ಓದುವುದಕ್ಕೆ ನನಗೆ ಸಾಧ್ಯವಿಲ್ಲ. ಒಂದು ಅರ್ಥಗರ್ಭಿತ ತೀಕ್ಷ್ಣ ಮಂದಹಾಸ ಮಾತ್ರ ಕಾಣುತ್ತಿದ್ದೇನೆ. ಅದೀಗಲೂ ಅಚ್ಚಳಿಯದೆ ನನ್ನೆದೆಯಲ್ಲಿ ಹಾಗೇ ಉಳಿದುಕೊಂಡುಬಿಟ್ಟಿದೆ.



ಕೃಪೆ : http://yakshachintana.blogspot.in


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ